ಗ್ರೇ, ಚಾಲ್ರ್ಸ್

	1764 - 1845. ಬ್ರಿಟಿಷ್ ರಾಜಕಾರಣಿ. ನಾಲ್ಕನೆಯ ವಿಲಿಯಂ ದೊರೆಯ ಕಾಲದಲ್ಲಿ, 1830 - 1834ರಲ್ಲಿ ಪ್ರಧಾನಮಂತ್ರಿಯಾಗಿದ್ದ. ಜನರಲ್ ಸರ್ ಚಾಲ್ರ್ಸ್ ಗ್ರೇಯ ಮಗ. ಈಟನ್ ಮತ್ತು ಕೇಂಬ್ರಿಜ್ ಕಿಂಗ್ಸ್ ಕಾಲೇಜಿನಲ್ಲಿ ವಿದ್ಯಾಭ್ಯಾಸ ಮಾಡಿ 1786ರಲ್ಲಿ ಪಾರ್ಲಿಮೆಂಟ್ ಸದಸ್ಯನಾದ. ಸಂಸದೀಯ ಸುಧಾರಣೆಗಳಿಗಾಗಿ ಫ್ರೆಂಡ್ಸ್ ಆಫ್ ದಿ ಪೀಪಲ್ ಎಂಬ ಸಂಘವೊಂದನ್ನು ಸ್ಥಾಪಿಸಲು (1792) ನೆರವಾದ. ಪಿಟ್ಟನ ಸರ್ಕಾರದ ವಿದೇಶನೀತಿಯನ್ನೂ 1794 - 95ರ ದಬ್ಬಾಳಿಕೆಯ ಕಾನೂನನ್ನು ಗ್ರೇಟ್ - ಬ್ರಿಟನ್ ಮತ್ತು ಐರ್ಲೆಂಡುಗಳ ವೈಧಾನಿಕ ಒಕ್ಕೂಟವನ್ನು ಈತ ವಿರೋಧಿಸಿದ. ವ್ಹಿಗ್ಗರು ಮತ್ತೆ ಅಧಿಕಾರಕ್ಕೆ ಬಂದಾಗ (1806) ಈತನ ತಂದೆಗೆ ಅರ್ಲ್ ಪದವಿ ಲಭ್ಯವಾಯಿತು. ಈತ ಆಡ್ಮಿರಾಲ್ಟಿಯ ಪ್ರಥಮ ಲಾರ್ಡ್ ಆದ. ಮುಂದೆ ಇವನಿಗೆ ವಿದೇಶಾಂಗ ಸಚಿವ ಪದವಿ ದೊರಕಿತು. ತಂದೆಯ ಅರ್ಲ್ ಪದವಿಗೆ ಈತ ಉತ್ತರಾಧಿಕಾರಿಯಾದಾಗ ಇವನು ಕಾಮನ್ಸ್ ಸಭೆಯ ಸದಸ್ಯತ್ವವನ್ನು ಕಳೆದುಕೊಂಡ. ಅದಕ್ಕೆ ಮುಂಚೆ ಇವನ ಪಕ್ಷ ಅಧಿಕಾರ ಕಳೆದುಕೊಂಡಿದ್ದರಿಂದ ಇವನ ಅಧಿಕಾರವೂ ಹೋಗಿತ್ತು. ಲಾಡ್ರ್ಸ್ ಸಭೆ ಇವನಿಗೆ ಅಷ್ಟಾಗಿ ಹಿಡಿಸಲಿಲ್ಲ. 1824ರಲ್ಲಿ ಈತ ಪಕ್ಷದ ನಾಯಕತ್ವಕ್ಕೆ ರಾಜೀನಾಮೆ ನೀಡಿದ. 1830ರ ಚುನಾವಣೆಗಳ ಅನಂತರ ಈತ ಮತ್ತೆ ನಾಯಕತ್ವ ವಹಿಸಿದ. ವೆಲಿಂಗ್ಟನ್ ಮಂತ್ರಿಮಂಡಲಕ್ಕೆ ಸೋಲಾದಾಗ ದೊರೆ ನಾಲ್ಕನೆಯ ವಿಲಿಯಂ ಈತನನ್ನು ಸರ್ಕಾರ ರಚಿಸಲು ಆಹ್ವಾನಿಸಿದ. ಸಂಸದೀಯ ಸುಧಾರಣಾ ವಿಧೇಯಕಕ್ಕೆ ಒಪ್ಪಿಗೆ ದೊರಕಿಸಲು ಗ್ರೇ ಮಾಡಿದ ಪ್ರಯತ್ನಕ್ಕೆ ಲಾಡ್ರ್ಸ್ ಸಭೆಯಲ್ಲಿ ಜಯ ದೊರಕಲಿಲ್ಲ. ಆದ್ದರಿಂದ 1832ರ ಮೇ ತಿಂಗಳಲ್ಲಿ ಗ್ರೇ ಮಂತ್ರಿಮಂಡಲ ರಾಜೀನಾಮೆ ಸಲ್ಲಿಸಿ ಕೆಲವು ದಿನಗಳ ಅನಂತರ ಮತ್ತೆ ಅಧಿಕಾರಕ್ಕೆ ಬಂತು. ಸುಧಾರಣಾ ವಿಧೇಯಕಕ್ಕೆ ಟೋರಿಗಳ ವಿರೋಧವನ್ನು ಎದುರಿಸಲು ಹೆಚ್ಚು ಸಂಖ್ಯೆಯಲ್ಲಿ ಹೊಸ ಪೀರ್‍ಗಳನ್ನು ನಿರ್ಮಿಸಬೇಕೆಂಬ ಈತನ ಸಲಹೆಯನ್ನು ದೊರೆ ಒಪ್ಪಿದ. ಈ ಬೆದರಿಕೆಯಿಂದಾಗಿ ಸುಧಾರಣಾ ವಿಧೇಯಕಕ್ಕೆ ಒಪ್ಪಿಗೆ ದೊರಕಿತು. 1833ರಲ್ಲಿ ಈತನ ಸರ್ಕಾರ ಕಾರ್ಖಾನೆ ಅಧಿನಿಯಮವನ್ನು ಜಾರಿಗೆ ತಂದಿತು. ಬ್ರಿಟಿಷ್ ಸಾಮ್ರಾಜ್ಯದ ಆದ್ಯಂತ ಗುಲಾಮಗಿರಿಯನ್ನು ರದ್ದುಪಡಿಸುವ ವಿಧೇಯಕವನ್ನೂ ಪಾರ್ಲಿಮೆಂಟ್ ಒಪ್ಪಿತು. ಐರಿಷ್ ಚರ್ಚ್ ಸುಧಾರಣೆಯ ವಿಧೇಯಕದ ನಿಮಿತ್ತದಿಂದಾಗಿ ಸಂಪುಟದಲ್ಲಿ ಒಡಕು ಹುಟ್ಟಿತು. ಕೊನೆಗೆ 1834ರ ಮೇ ತಿಂಗಳಲ್ಲಿ ಗ್ರೇ ತನ್ನ ಪ್ರಧಾನ ಮಂತ್ರಿತ್ವಕ್ಕೆ ರಾಜೀನಾಮೆ ಸಲ್ಲಿಸಿ ರಾಜಕೀಯದಿಂದ ನಿವೃತ್ತಿ ಹೊಂದಿದ. ಗ್ರೇ ತೀರಿಕೊಂಡದ್ದು 1845ರ ಜುಲೈ 17ರಂದು.			(ಬಿ.ಎಸ್.ಎ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ